ಕ್ವೋವಾರಂಟೋ

 	ಒಂದು ಸಾರ್ವಜನಿಕ ಅಧಿಕಾರ ಸ್ಥಾನ, ವಿಶಿಷ್ಟ ಹಕ್ಕು, ವಿನಾಯಿತಿ ಅಥವಾ ಸ್ವಾತಂತ್ರ್ಯ ತನಗೆ ಉಂಟೆಂದು ಒಬ್ಬ ವ್ಯಕ್ತಿ ಸಾಧಿಸುತ್ತಿದ್ದಾನೆಂದು ಅಥವಾ ಅದನ್ನು ದುರಾಕ್ರಮಿಸಿಕೊಂಡಿದ್ದಾನೆಂದು ಒಂದು ನ್ಯಾಯಾಲಯಕ್ಕೆ ಅರ್ಜಿ ಬಂದಾಗ, ಆತನ ಆ ಅಧಿಕಾರಸ್ಥಾನ, ವಿಶಿಷ್ಟ ಹಕ್ಕು, ವಿನಾಯಿತಿ ಅಥವಾ ಸ್ವಾತಂತ್ರ್ಯವನ್ನು ಯಾವ ಪ್ರಾಧಿಕಾರದ ಆಧಾರದ ಮೇಲೆ ಸಾಧಿಸುತ್ತಿದ್ದಾನೆಂದು ಕೇಳಿ ಆ ನ್ಯಾಯಾಲಯ ನೀಡಿದ ಆಜ್ಞೆ (ಅಧಿಕಾರ ಪೃಚ್ಛೆ). ಭಾರತದಲ್ಲಿ ಪರಮೋಚ್ಚ ಮತ್ತು ಉಚ್ಚ ನ್ಯಾಯಾಲಯಗಳು ಇಂಥ ಅರ್ಜಿಯನ್ನು ಸ್ವೀಕರಿಸಿ ಈ ಬಗ್ಗೆ ಆಜ್ಞೆ ನೀಡುತ್ತವೆ. 

ದೇಶದ ಪರಮಾಧಿಕಾರದ ಹಕ್ಕನ್ನು ಚಲಾಯಿಸುವುದಕ್ಕೆಂದು ಉದ್ಭವಿಸಿದ ಈ ಕ್ರಮವನ್ನು ಇಂದಿಗೂ ಬಹುಮಟ್ಟಿಗೆ ಉಳಿಸಿಕೊಂಡಿರಲಾಗಿದೆ. ಒಬ್ಬ ವ್ಯಕ್ತಿ ಸಾರ್ವಜನಿಕ ಅಧಿಕಾರ ಸ್ಥಾನವನ್ನು ದುರಾಕ್ರಮಿಸಿದರೆ ಅಂಥ ವ್ಯಕ್ತಿಯ ವಿರುದ್ಧ ಈ ಅರ್ಜಿಯನ್ನು ಸಲ್ಲಿಸಬಹುದು. ಹಾಗೆ ಅತಿಕ್ರಮಿಸಲು ಅವನಿಗೆ ಯಾವ ಪ್ರಾಧಿಕಾರವಿದೆ ಎಂದು ವಿಚಾರಿಸಿ, ಪ್ರಾಧಿಕಾರವಿಲ್ಲವೆಂದು ರುಜುವಾತಾದರೆ ಅವನನ್ನು ಉಚ್ಚಾಟನೆ ಮಾಡಲು ತೀರ್ಪುಕೊಡುತ್ತದೆ. ಸ್ಥಾನಭ್ರಷ್ಟನಾಗಿದ್ದವನನ್ನು ಅವನ ಸ್ವಸ್ಥಾನದಲ್ಲಿರಿಸುತ್ತದೆ. ಈ ಆಜ್ಞೆ ಸಾರ್ವಜನಿಕ ಸ್ಥಾನಭಷ್ಟತೆಗೇ ವಿನಾ ವೈಯಕ್ತಿಕ ಅಧಿಕಾರಚ್ಯುತಿಗೆ ಅನ್ವಯಿಸುವುದಿಲ್ಲ. ಈ ಸಾರ್ವಜನಿಕ ಸ್ಥಾನ ಕಾಯಿದೆಯ ಮುಖೇನ ಅಥವಾ ಕಾಯಿದೆಯಲ್ಲಿ ನಿಯಮಿಸಿದ ಅಧಿಕಾರದಿಂದ ಸ್ಥಾಪಿಸಿದ್ದಾಗಿರಬೇಕು. ಅತಿಕ್ರಮಿಸಿದವನಿಗೆ ಕಾನೂನು ರೀತ್ಯಾ ಆ ಸ್ಥಾನವನ್ನು ಪಡೆಯಲು ಅಧಿಕಾರವಿರಕೂಡದು.

ಕುಲಪತಿ, ನ್ಯಾಯಧೀಶರು, ಅಡ್ವೊಕೇಟ್ ಜನರಲ್, ಸರ್ಕಾರಿ ಅಧಿಕಾರವರ್ಗದವರು, ವಿಶ್ವವಿದ್ಯಾನಿಲಯದ ಮತ್ತು ಪೌರಸಭೆಯ ಅಧಿಕಾರವರ್ಗದವರು, ಮಂತ್ರಿಗಳು ಇವರೆಲ್ಲ ಸಾರ್ವಜನಿಕ ಅಧಿಕಾರಿಗಳಾಗಿರುತ್ತಾರೆ. ಚುನಾಯಿತವಾದ ಸ್ಥಾನಗಳೂ ಈ ಗುಂಪಿಗೆ ಸೇರಿವೆ. ಚುನಾವಣೆ ಭ್ರಷ್ಟಾಚಾರದಿಂದೊಡಗೂಡಿ ನ್ಯಾಯಬಾಹಿರವಾಗಿದ್ದರೆ, ಆ ಮೂಲಕ ಆ ಸ್ಥಾನವನ್ನು ಅಲಂಕರಿಸಿದವನನ್ನು ಉಚ್ಚಾಟನೆ ಮಾಡಲು ಈ ಬಗೆಯ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದು. ಅನರ್ಹನನ್ನು ಒಂದು ಅಧಿಕಾರ ಸ್ಥಾನಕ್ಕೆ ನಿಯಮಿಸಿದರೆ ಅದರಿಂದ ತೊಂದರೆಗೀಡಾದವನು ಇದನ್ನು ಸಲ್ಲಿಸಬಹುದು. ಸೂಕ್ತವಾದ ಮತ್ತಾವುದಾದರೊಂದು ಪರಿಹಾರವಿದ್ದರೆ, ಅರ್ಜಿದಾರ ದುರುದ್ದೇಶದಿಂದ ಅರ್ಜಿ ಸಲ್ಲಿಸಿದ್ದರೆ, ಅತಿ ಕಾಲವಿಳಂಬ ಮಾಡಿದ್ದರೆ ಅಥವಾ ಪರಿಹಾರ ಏನು ಅಪೇಕ್ಷಿಸುತ್ತಿದ್ದನೋ ಅದಕ್ಕೆ ಅನುಮೋದಿಸಿದ್ದರೆ ಅಥವಾ ಆಧಾರರಹಿತ ಅರ್ಜಿಯಾಗಿದ್ದರೆ, ಅಂಥ ಅರ್ಜಿಯನ್ನು ನ್ಯಾಯಾಲಯ ನಿರಾಕರಿಸುತ್ತದೆ.               								 (ಎಂ.ಎಸ್.ಆರ್.)